ಪ್ರತಿಭಾವಂತ ಮಕ್ಕಳು

 ಮನುಷ್ಯರನ್ನು ಅವರ ಬುದ್ಧಿಶಕ್ತಿಯ ಆರೋಹಣ ಕ್ರಮದಲ್ಲಿ ಮಡ್ಡಿಗಳು, ತೀರ ಮಂಕರು, ಮಂಕರು, ಸಾಮಾನ್ಯ ಬುದ್ಧಿಶಕ್ತಿಯವರು, ಬುದ್ಧಿವಂತರು, ಪ್ರತಿಭಾವಂತರು ಮತ್ತು ಉನ್ನತ ಪ್ರತಿಭಾವಂತರು ಎಂಬುದಾಗಿ ಏಳು ಗುಂಪುಗಳಾಗಿ ವಿಂಗಡಿಸಬಹುದು, ಇವರಲ್ಲಿ ಸಾಮಾನ್ಯ ಬುದ್ಧಿಶಕ್ತಿಯವರು ಒಟ್ಟುಸಂಖ್ಯೆಯ ಸುಮಾರು ಶೇ. 50 ರಷ್ಟಿರುತ್ತಾರೆ. ಮಂಕರು, ತೀರ ಮಂಕರು, ಮತ್ತು ಮಡ್ಡಿಗಳು ಕ್ರಮವಾಗಿ ಶೇ 16,7,2ರಷ್ಟೂ ಬುದ್ಧಿವಂತರು ಮತ್ತು ಉನ್ನತ ಪ್ರತಿಭೆಯವರೂ ಶೇ 16, ಶೇ 7, ಶೇ. 2 ರಷ್ಟೂ ಇರುತ್ತಾರೆ. ಆದ್ದರಿಂದ ಒಟ್ಟು ಸಂಖ್ಯೆಯಲ್ಲಿ ಸುಮಾರು ಶೇ. 25 ಮಂದಿ ಸಾಮಾನ್ಯ ಮಟ್ಟಕ್ಕಿಂತಲೂ ಹೆಚ್ಚಿನ ಬುದ್ಧಿಶಕ್ತಿಯುಳ್ಳವರೂ ಇರುವರು.ಇವರಲ್ಲಿ ಕೆಳಗಿನ ಶೇ 16 ಮಂದಿ ಬುದ್ಧಿವಂತರು, ಮೇಲಿನ ಶೇ. 9 ಮಂದಿ ಪ್ರತಿಭಾವಂತರು.

	ಬುದ್ಧಿಶಕ್ತಿಯ ಮಟ್ಟವನ್ನು ಬುದ್ಧಿಶಕ್ತಿಯ ಭಾಗಲಬ್ಧದಿಂದ (ಐಕ್ಯ) ಅಳೆಯುತ್ತಾರೆ. ಈ ಮಾನದಂಡದ ಪ್ರಕಾರ ಬುದ್ಧಿಶಕ್ತಿಯ ಭಾಗಲಬ್ದ 90-110ರ ಐಕ್ಯುವರೆಗೆ ಇರುವವರೆಲ್ಲರೂ ಸಾಮಾನ್ಯ ಬುದ್ಧಿಶಕ್ತಿಯವರು, ಮಡ್ಡಿಗಳು 0-70 ಐಕ್ಯು ಉಳ್ಳವರು. ಹಾಗೆಯೇ ತೀರ ಮಂಕರು 70-80 ಐಕ್ಯು ಉಳ್ಳವರು. ಸಾಮಾನ್ಯರು 90-110 ಐಕ್ಯುವನ್ನೂ ಉಳ್ಳವರು. ಬುದ್ಧಿವಂತರು 110-120 ಐಕ್ಯು ಉಳ್ಳವರು. ಪ್ರತಿಭಾವಂತರು 120-130 ಐಕ್ಯುವನ್ನೂ ಉನ್ನತ ಪ್ರತಿಭಾವಂತರು 130ರಿಂದ ಮೇಲಿನ ಐಕ್ಯುವನ್ನು ಹೊಂದಿರುತ್ತಾರೆ. ಈ ಅನುಕ್ರಮದಲ್ಲಿ ಬುದ್ಧಿಶಕ್ತಿಯ ಆಧಾರದ ಮೇಲೆ ಬೇರೆ ಬೇರೆ ಮಟ್ಟಗಳನ್ನಾಗಿ ವಿಂಗಡಿಸಬಹುದು.

	ಪ್ರತಿಭೆಯ ವಿವಿಧ ಮುಖಗಳು: ಪ್ರತಿಭೆ ಜೀವನದ ವಿವಿಧ ಕ್ಷೇತ್ರಗಳಲ್ಲಿ ಕಾಣಿಸಿಕೊಳ್ಳಬಹುದು. ದಿವ್ಯತತ್ತ್ವಜ್ಞಾನಿ, ಸಾಹಿತಿ, ಚತುರ ರಾಜಕಾರಣಿ, ಉನ್ನತ ವಿಜ್ಞಾನಿ, ನಿಪುಣ ಎಂಜಿನಿಯರ್, ದಕ್ಷ ಡಾಕ್ಟರ್ ಶ್ರೇಷ್ಠ ಉಪಾಧ್ಯಾಯ, ಕುಶಲ ಕಲಾವಿದ, ತೀಕ್ಷನ್ಯಾಯವಾದಿ-ಇವೆಲ್ಲರೂ ಪ್ರತಿಭಾವಂತರೇ, ಆದರೆ ಇವರ ಪ್ರತಿಭೆ ವಿವಿಧ ರೀತಿಯದು. ಒಂದೊಂದು ಕ್ಷೇತ್ರದ ಜನರಲ್ಲೂ ಪರಸ್ಪರ ತಾರತಮ್ಯವಿರುವುದು ಸ್ವಾಭಾವಿಕ. ಕೆಲವರು ಸಾಮಾನ್ಯ ಪ್ರತಿಭೆಯವರಾದರೆ, ಕೆಲವರು ಹೆಚ್ಚಿನ ಪ್ರತಿಭೆಯವರು, ಕೆಲವರು ಉನ್ನತ ಪ್ರತಿಭೆಯವರು. ಪ್ರತಿಭೆ ಅಥವಾ ಬುದ್ಧಿಶಕ್ತಿ ಅನುವಂಶಿಕವಾದ್ದರಿಂದ ಹಿರಿಯರಂತೆ ಮಕ್ಕಳಲ್ಲೂ ಪ್ರತಿಭೆ ಹಲವು ಮುಖವಾಗಿರುವುದಲ್ಲದೆ ಹಲವು ಮಟ್ಟದ್ದಾಗಿಯೂ ಇರುತ್ತದೆ.

	ಪ್ರತಿಭಾವಂತ ಮಕ್ಕಳನ್ನು ಗುರುತಿಸುವುದರ ಅವಶ್ಯಕತೆ: ಪ್ರತಿಭಾವಂತ ಮಕ್ಕಳು ಮುಂದೆ ಮಾನವ ಜನಾಂಗದ ನಾಗರಿಕತೆಯ ಬೆಳೆವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸತಕ್ಕವರು. ಉತ್ತಮ ಶಿಕ್ಷಣ ಮತ್ತು ಯುಕ್ತ ಅವಕಾಶ ದೊರಕಿದಲ್ಲಿ ಇವರ ಪ್ರತಿಭೆ ವಿಕಾಸಹೊಂದಿ ಸಮಾಜಕ್ಕೆ, ತಮ್ಮ ರಾಷ್ಟ್ರಕ್ಕೆ, ಏಕೆ ಇಡೀ ಜಗತ್ತಿಗೇ ಇವರು ಉತ್ತಮಶೇವೆ ಸಲ್ಲಿಸಬಲ್ಲರು. ಆದ್ದರಿಂದ ಇಂಥ ಮಕ್ಕಳನ್ನು ಪ್ರಾರಂಭದಲ್ಲೇ ಗುರುತಿಸಿ ಅವರಿಗೆ ಯುಕ್ತ ಶಿಕ್ಷಣ ದೊರಕಿಸುವುದು ಸಮಾಜದ ಕರ್ತವ್ಯ. ಬಡತನ ಮತ್ತು ಇತರ ಪ್ರತಿಕೂಲ ಸನ್ನಿವೇಶಗಳಿಂದಾಗಿ ಅವರಿಗೆ ಯೋಗ್ಯ ಶಿಕ್ಷಣ ದೊರೆಯದಿದ್ದಲ್ಲಿ ಅಥವಾ ಅವರು ಸಾಮಾನ್ಯರೊಡನೆ ಶಿಕ್ಷಣ ಪಡೆದಲ್ಲಿ ಅವರ ಪ್ರತಿಭೆ ಪ್ರಕಾಶಕ್ಕೆ ಬರದೆ ದೇಶಕ್ಕೇ ಏಕೆ ಇಡೀ ಪ್ರಪಂಚಕ್ಕೇ ನಷ್ಟವಾದೀತು.

	ಗುರುತಿಸುವ ಕ್ರಮ: ಪ್ರತಿಭಾವಂತ ಮಕ್ಕಳು ಸಾಮನ್ಯ ಮಕ್ಕಳಿಗಿಂತ ಹೆಚ್ಚಿನ ಬುದ್ದಿಶಕ್ತಿಯುಳ್ಳವರಾಗಿದ್ದು ಚಟುವಟಿಕೆಗಳಲ್ಲೂ ಮಾತಿನಲ್ಲೂ ಚುರುಕಾಗಿರುತ್ತಾರೆ. ಪ್ರಶ್ನೆಗೆ ಉತ್ತರ ನೀಡುವಾಗಲೂ ಮುಂದಿರುತ್ತಾರೆ. ಆದರೂ ಶಾಸ್ತ್ರೀಯವಾಗಿ ಇವರ ಬುದ್ಧಿಶಕ್ತಿಯ ಮಟ್ಟವನ್ನು ಕಂಡುಹಿಡಿದು ವರ್ಗೀಕರಿಸುವುದು ಸರಿಯಾದ ಕ್ರಮ. ಈ ಕಾರ್ಯಕ್ಕೆ ಬುದ್ಧಿಶಕ್ತಿಯ ಪ್ರಶ್ನಾವಳಿಗಳನ್ನೂ ಕಾರ್ಯಪ್ರದ ಪರೀಕ್ಷೆಗಳನ್ನೂ ಉಪಯೋಗಿಸಬಹುದು. ಅಮೆರಿಕ, ಇಂಗ್ಲೆಂಡ್ ಮೊದಲಾದ ಪಾಶ್ಚಾತ್ಯ ದೇಶಗಳಲ್ಲಿ ಈ ಕಾರ್ಯ ಈ ಶತಮಾನದ ಎರಡನೆಯ ದಶಕದಿಂದಲೂ ನಡೆಯುತ್ತಿದೆ ಪ್ರಾಥಮಿಕ ಶಾಲೆಯಲ್ಲೇ ಪ್ರತಿಭಾವಂತ ಮಕ್ಕಳನ್ನು ಗುರುತಿಸಿ, ಅವರಿಗೆ ವಿಶಿಷ್ಟ ಶಿಕ್ಷಣವನ್ನು ವ್ಯವಸ್ಥೆಮಾಡಲಾಗುತ್ತಿದೆ. ಇಂಗ್ಲೆಂಡ್ ದೇಶದಲ್ಲಿ 11ನೆಯ ವರ್ಷದ ಅನಂತರ ಒಂದು ಪರೀಕ್ಷೆ ನಡೆಸಿ ಅದರ ಫಲಿತಾಂಶದ ಆಧಾರದ ಮೇಲೆ ಆರಿಸಿದ ಪ್ರತಿಭಾವಂತ ಮಕ್ಕಳನ್ನು ಗ್ರ್ಯಾಮರ್ ಶಾಲೆಗೆ ಕಳಿಸುವ ಏರ್ಪಾಟಿದೆ. ಇತರ ಅನೇಕ ಪಾಶ್ಚಾತ್ಯ ದೇಶಗಳಲ್ಲೂ ಒಂದೊಂದು ರೀತಿಯ ಆಯ್ಕೆಯ ವ್ಯವಸ್ಥೆ ಇದೆ. ಭಾರತದಲ್ಲಿ ಈ ಬಗ್ಗೆ ಈಚೆಗೆ ಆಸಕ್ತಿ ತೋರಲಾಗುತ್ತಿದೆ. ಸಾರ್ವತ್ರಿಕ ಪರೀಕ್ಷೆಯ ಫಲಿತಾಂಶದ ಆಧಾರದ ಮೇಲೆ ಪ್ರತಿಭಾವಂತರನ್ನು ಗುರುತಿಸಿ ವಿದ್ಯಾರ್ಥಿವೇತನವೇ ಮುಂತಾದ ಉತ್ತೇಜನಗಳನ್ನು ನೀಡಲಾಗುತ್ತಿದೆ. ಕೇಂದ್ರಸರ್ಕಾರ ಪ್ರತಿವರ್ಷವೂ ಪ್ರತಿಭಾನ್ವೇಷಣೆ (ಟ್ಯಾಲೆಂಟ್ ಸರ್ಚ್) ಕಾರ್ಯಕ್ರಮದ ಮೂಲಕ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಅವರ ವಿಶೇಷ ಶಿಕ್ಷಣಕ್ಕೆ ವ್ಯವಸ್ಥೆ ಮಾಡುತ್ತಿದೆ.

	ಶಿಕ್ಷಣವ್ಯವಸ್ಥೆ: ಮಂಕುಬುದ್ಧಿಯವರಂತೆ ಪ್ರತಿಭಾವಂತ ಮಕ್ಕಳೂ ದೇಶಕ್ಕೆ ಒಂದು ಸಮಸ್ಯೆ. ಇವರು ಜೂಜಿನ ಕುದುರೆಯಂತೆ ಬಲು ತೀವ್ರ. ಬಲು ಚುರುಕು, ಇವರಿಗೆ ಮುಂದೋಡುವ ಆತುರ. ತಡೆ ಇವರಿಗೆ ಸಹಿಸದು. ಮಂದಗತಿ ಹಿಡಿಸದು. ಆದ್ದರಿಂದ, ಸಾಮಾನ್ಯ ಬುದ್ಧಿಶಕ್ತಿಯ ಮಕ್ಕಳಿಗೆ ವ್ಯವಸ್ಥೆ ಮಾಡಿದ ಶಿಕ್ಷಣಕ್ರಮ ಇವರಿಗೆ ಹೊಂದುವುದಿಲ್ಲ. ಇವರಿಗೇ ಆದ ವಿಶೇಷ ಶಿಕ್ಷಣ ವ್ಯವಸ್ಥೆ ಅಗತ್ಯ.

	ಪ್ರತಿಭಾವಂತ ಮಕ್ಕಳಿಗೆ ವಿಶಾಲವಾದ ಅಥವಾ ಆಳವಾದ ಸಂಪನ್ನಪಠ್ಯಕ್ರಮವನ್ನು ಗೊತ್ತುಮಾಡುವುದು, ಅಧಿಕವಾಚನಕ್ಕೆ ಅವಕಾಶ ಕಲ್ಪಿಸುವುದು. ಸ್ವತಂತ್ರ ಅಧ್ಯಯನ, ಸಾಮಾಜಿಕ ಮತ್ತು ಸಾಂಸ್ಕøತಿಕ ಕಾರ್ಯಕ್ರಮಗಳಲ್ಲಿ ನಾಯಕತ್ವವಹಿಸುವುದು-ಇವೇ ಮೊದಲಾದವುಗಳಿಗೆ ಹೆಚ್ಚು ಅವಕಾಶವನ್ನು ಕಲ್ಪಿಸಬಹುದು. ಶೀಘ್ರ ತೇರ್ಗಡೆಗೆ ಅವಕಾಶ ಕಲ್ಪಿಸಬಹುದು. ಈ ಬಗೆಯ ಮಕ್ಕಳಿಗೆ ಪ್ರತ್ಯೇಕವಾದ ಪಾಠಶಾಲೆಗಳನ್ನೋ ತರಗತಿಗಳನ್ನೋ ಏರ್ಪಡಿಸುವುದು ಉತ್ತಮ; ವಿಶೇಷ ರೀತಿಯ ಸಲಹೆ ಮತ್ತು ಮಾರ್ಗದರ್ಶನ ಕೊಡುವುದೂ ಅಗತ್ಯ.
(ಟಿ.ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ